ಸೋರುತಿಹುದು ಮನೆಯ ಮಾಳಿಗಿ

ಶಿಶುನಾಳ ಶರೀಫ

ಸೋರುತಿಹುದು ಮನೆಯ ಮಾಳಿಗಿ

ಅಜ್ಞಾನದಿಂದ

ಸೋರುತಿಹುದು ಮನೆಯ ಮಾಳಿಗಿ ||

ಸೋರುತಿಹುದು ಮನೆಯ ಮಾಳಿಗಿ

ದಾರುಗಟ್ಟಿ ಮಾಳ್ಪರಿಲ್ಲ

ಕಾಳ ಕತ್ತಲೆಯೊಳಗೆ ನಾನು

ಮೇಲಕೇರಿ ಹೋಗಲಾರೆ ||

ಮುರುಕು ತೊಲೆಯು ಹುಳುಕು ಜಂತಿ

ಕೊರೆದು ಸರಿದು ಕೇಲ ಸಡಲಿ

ಹರಕು ಚಪ್ಪರ ಜೇರುಗಿಂಡಿ

ಮೇಲಕೇರಿ ಹೋಗಲಾರೆ ||

ಕರಕಿ ಹುಲ್ಲು ಕಸವು ಹತ್ತಿ

ಹರಿದು ಸಾಲು ಇರುವಿ ಮುತ್ತಿ

ಜಲದಿ ಭರದಿ ಸರಿಯೆ ಮಣ್ಣು

ಒಳಗೆ ಹೊರಗೆ ಏಕವಾಗಿ ||

ಕಾಂತೆ ಕೇಳೆ ಕರುಣದಿಂದ

ಬಂತು ಕಾಣೆ ಹುಬ್ಬಿ ಮಳೆಯು

ಎಂತೊ ಶಿಶುನಾಳಧೀಶ ತಾನು

ನಿಂತು ಪೊರೆವನು ಎಂದು ನಂಬಿದೆ ||